ನಗೆಬರಹಗಳು -
	ಎಲ್ಲ ದೇಶದ, ಎಲ್ಲ ಕಾಲದ, ಎಲ್ಲ ವಯಸ್ಸಿನ ಮಾನವ ವರ್ಗದ ಮನರಂಜನೆಗಾಗಿ ವಿವಿಧ ಲೇಖಕರು ರಚಿಸಿದ ಹಲವಾರು ಹಗುರ ಲೇಖನಗಳನ್ನು ಈ ಶೀರ್ಷಿಕೆಯಲ್ಲಿ (ಕಾಮಿಕ್ ರೈಟಿಂಗ್ಸ್) ವಿವೇಚಿಸಬಹುದು. ಇದರಲ್ಲಿ ಹಲವು ಸಣ್ಣಪುಟ್ಟ ಹಾಸ್ಯಪ್ರಬಂಧಗಳು, ಅಣಕವಾಡುಗಳು, ಚುಟಕಗಳು ಮತ್ತು ಅನರ್ಥಕವನಗಳನ್ನೂ ಸೇರಿಸಬಹುದು. ಇಂಥ ನಗೆಬರೆಹಗಳ ಪರಂಪರೆ ನೂರಾರು ವರ್ಷಗಳಿಂದ ಬೆಳೆದುಬಂದಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಇದನ್ನು ಜನಪ್ರಿಯಗೊಳಿಸಿದವರಲ್ಲಿ ಆಲಿವರ್ ಗೋಲ್ಡ್‍ಸ್ಮಿತ್, ಎಡ್ವರ್ಡ್ ಲಿಯರ್, ಲೂಯಿ ಕ್ಯಾರಾಲ್, ಆಗ್ಡನ್ ನ್ಯಾಷ್ ಮೊದಲಾದವರು ಸುಪ್ರಸಿದ್ಧರು. ಕನ್ನಡ ನಗೆಬರಹಗಾರರಲ್ಲಿ ನಾ.ಕಸ್ತೂರಿ, ಜಿ.ಪಿ. ರಾಜರತ್ನಂ, ನಾಡಿಗೇರ ಕೃಷ್ಣರಾವ್, ರಾ.ಶಿ., ಬೀಚಿ, ಕೈಲಾಸಂ-ಮೊದಲಾದವರು ಸಿದ್ಧಹಸ್ತರು.

	ಇಂಥ ನಗೆಬರಹಗಳಲ್ಲಿ ಕಾಣುವ ಹಾಸ್ಯದಲ್ಲಿ ಕಹಿಯಿಲ್ಲ, ಚುಚ್ಚುನುಡಿಗಳಿಲ್ಲ, ಆದರೆ ತರ್ಕಬದ್ಧವಾದ ಅರ್ಥಕ್ಕಿಂತಲೂ ತರ್ಕವಿಲ್ಲದ ಶುದ್ಧ ಅನರ್ಥಕ್ಕೂ ಇಲ್ಲಿ ಹೆಚ್ಚು ಪ್ರಾಧಾನ್ಯ ತಿಳಿಯಾದ ನವಿರು ನಗೆಗಿಂತಲೂ ಹುಚ್ಚುನಗೆಗೇ ಹೆಚ್ಚು ಗಮನ. ಸನ್ನಿವೇಶದ ಅಸಂಬದ್ಧತೆ, ವಿಚಿತ್ರಪಾತ್ರಗಳ ಹುಚ್ಚು ಕಲ್ಪನೆ, ಮಾತಿನ ಚಮತ್ಕಾರ, ವಿರೋಧಾಭಾಸಗಳಿಂದ ನಗೆಯ ಅಲ್ಲೋಲಕಲ್ಲೋಲವೆಬ್ಬಿಸುವುದೇ ಈ ಕೃತಿಗಳ ಮೂಲ ಉದ್ದೇಶ.

	ಇವುಗಳಲ್ಲಿ ಕೆಲವು ಮಕ್ಕಳ ಉಲ್ಲಾಸಕ್ಕೆ ಬರೆದವುಗಳಾದರೂ ಇವುಗಳಲ್ಲಿ ರಾಜಕೀಯ-ಸಾಮಾಜಿಕ ವಿಡಂಬನೆಯೂ ಸೇರಿರಬಹುದು. ಈ ಕೆಳಗಿನ ಸಾಲುಗಳನ್ನು ನೋಡಿ:
ಕೇಳಿ! ಕೇಳಿ! ನಾಯಿಗಳು ಬೊಗಳುತಿವೆ
ಭಿಕ್ಷುಕರ ಗುಂಪು ಬರುತಿದೆ ಊರೊಳಕ್ಕೆ
ಚಿಂದಿಯುಟ್ಟ ಕೆಲವರು, ತುಂಡು ತೊಟ್ಟ ಹಲವರು
ಅವರಲ್ಲೊಬ್ಬನದು ಮಾತ್ರ ಕಿಂಕಾಪಿನ ಅಂಗಿ
ಇದು ಯಾವನೋ ಪರಕೀಯ ರಾಜನೊಬ್ಬ ತನ್ನ ಅಪಾಪೋಲಿ ಅನುಯಾಯಿಗಳೊಡನೆ ಊರೊಳಕ್ಕೆ ಬಂದಾಗ ಅಜ್ಞಾತ ಕವಿಯೊಬ್ಬ ಹಾಡಿಕೊಂಡ ಸ್ವಗಾತಗೀತೆ. ಹೀಗೆ ವಿಡಂಬನೆಗಾಗಿಯೇ ಬರೆದ ಹಲವು ಪದ್ಯಗಳು ನಮಗೆ ಸಿಕ್ಕುತ್ತವೆ.

	ಕೆಲವು ಹಾಸ್ಯಲೇಖನಗಳಲ್ಲಿ ಚಿತ್ರ ವಿಚಿತ್ರ ಪಾತ್ರಗಳ ಅಸಂಬದ್ಧ ಕಲ್ಪನೆಯಿದೆ. ಕೆಳಗಿನ ಸಾಲುಗಳನ್ನು ನೋಡಿ:
ತೆಸೆಲೆಯೆಂಬ ಊರಿನಲ್ಲಿ ಇದ್ದ ಒಬ್ಬ ಜಾಣ
ಅವನೆದುರು ಊರಿನ ಜನ ನಿಜಕೂ ಕೋಣ
ಹಾರಿಯೇಬಿಟ್ಟ ಒಂದು ದಿನ ಗೂಸ್‍ಬೆರಿ ಪೊದೆಗೆ
ಕಿತ್ತುಬಿಟ್ಟ ತನ್ನ ಎರಡು ಕಣ್ಣುಗಳ ಕಡೆಗೆ
ಎರಡು ಕಣ್ಣು ಕಿತ್ತು ಬಂದುದ ಕಂಡ
ಹಲ್ಲುಕಚ್ಚಿ, ಅಟ್ಟಹಾಸದಿಂದ ಭಂಡ
ಇನ್ನೊಂದು ಗೂಸ್‍ಬೆರಿ ಪೊದೆಗೆ ಜಿಗಿದುಬಿಟ್ಟ
ಕೈಯಲ್ಲಿದ್ದ ಕಣ್ಣುಗಳ ಮುಖದೊಳಕ್ಕೆ ಸೇರಿಸಿಬಿಟ್ಟ
ಹಾಗೆಯೇ
ಸೊಟ್ಟ ಪಟ್ಟ ಮರದ ತುದಿಯಲಿ
ಕ್ವಾಂಗಲ್ ವ್ಯಾಂಗಲ್ ಕೂತಿದ್ದ
ಕಾಣಿಸದು ಅವನ ಮೂತಿ ಉದ್ದ
ಪುಟ್ಟ ತಲೆಯ ಮೇಲೆ ಬುಟ್ಟಿ ಟೋಪಿ ಹಾಕಿದ್ದ.

	ಈ ಚುಟುಕಗಳಲ್ಲಿರಬಹುದಾದ ರಾಜಕೀಯ ಸಾಮಾಜಿಕ ವಿಡಂಬನೆ ನಮಗೆ ಗೊತ್ತಾಗದಿದ್ದರೂ ಇಲ್ಲಿನ ವಿಚಿತ್ರ ಹುಚ್ಚುಕಲ್ಪನೆ ನಮ್ಮಲ್ಲಿ ನಗೆಯನ್ನುಂಟು ಮಾಡುತ್ತದೆ.

	ಕೆಲವು ಹಾಸ್ಯ ಕವನ ಕಥೆಗಳಲ್ಲಿ ನೀತಿಬೋಧೆಯ ಉದ್ದೇಶವಿರುವಂತೆ ತೋರುತ್ತದೆ. ಅವುಗಳಲ್ಲಿ ಬರುವ ಒಳ್ಳೆಯ ಪಾತ್ರಗಳು ಸುಂದರವಾಗಿರುತ್ತವೆ. ಕೆಟ್ಟವರು ಕುರೂಪಿಗಳಾಗಿರುತ್ತಾರೆ. ಕಡೆಯಲ್ಲಿ ದುಷ್ಟರಿಗೆ ಶಿಕ್ಷೆ, ಒಳ್ಳೆಯವರಿಗೆ ಸುಖದ ಗಂಜಿ. ಡಬ್ಲ್ಯೂ.ಎಸ್. ಗಿಲ್‍ಬರ್ಟ್, ಮನ್‍ಚಸನ್‍ರ ಕೆಲವು ಕಥೆಗಳಲ್ಲಿ ಅನರ್ಥದ ಹುಚ್ಚುಹಾಸ್ಯವಿದೆ.

	ಕೆಲವು ನಗೆ ಕವನಗಳ ವಾಕ್ಯಗಳನ್ನು ನಾಲಗೆ ತೊದಲಿಸುವುವು ಎಂದು (ಟಂಗ್ ಟ್ವಿಸ್ಟರ್ಸ್) ಕರೆಯಬಹುದು. ಉದಾಹರಣೆಗೆ ನಮ್ಮಲ್ಲಿನ `ತರೀಕೆರೆ ಕೆರೆ ಏರಿಮೇಲೆ, ಮೂರು ಕರಿ ಕುರಿಮರಿ ಮೇಯುತ್ತಿದ್ದವು ಎಂದ ಹಾಗೆ.

	ಇಂಥ ಸಾಲುಗಳು ಷೇಕ್ಸ್‍ಪಿಯರನ ವಿದೂಷಕರ ಮಾತುಗಳಲ್ಲಿ ಸಿಕ್ಕುತ್ತವೆ. ಯಾವುದೋ ಒಂದು ಕಾಲದ ಜನರ ಆಡುಮಾತುಗಳಲ್ಲಿ ಈ ಸಾಲುಗಳಿಗೆ ವಿಶೇಷ ಅರ್ಥವಿದ್ದು ಕಾಲಕ್ರಮೇಣ ಅವು ಕೇವಲ ಹಾಸ್ಯದ ಪ್ರಾಸವುಳ್ಳ ಶಬ್ಧವೃಂದಗಳಾಗಿರಬಹುದು.

	ವಿನೋದಕರವಾದ ಪ್ರಾಸವುಳ್ಳ ಪದ್ಯಗಳು ಹುಡ್ ಕವಿಯಲ್ಲೂ ಗೋಲ್ಡ್‍ಸ್ಮಿತ್ ಸಂಗ್ರಹಿಸಿದ್ದ ಮದರ್‍ಗೂಸಸ್ ಮೆಲಡಿಯಲ್ಲೂ ಸಿಕ್ಕುತ್ತವೆ. ಈ ಪದ್ಯಗಳಿಗೆ ಗೋಲ್ಡ್‍ಸ್ಮಿತ್ ವಿನೋದಕರವಾದ ಟಿಪ್ಪಣಿಗಳನ್ನು ಬರೆದು ಅವುಗಳ ಸ್ವಾರಸ್ಯವನ್ನು ಹೆಚ್ಚಿಸಿದ್ದಾನೆ.

	ಈ ಸಾಲುಗಳನ್ನು ನೋಡಿ:

ಒಂದು ಗುಡ್ಡದಡಿಯಲ್ಲೇ
ಒಬ್ಬ ಮುದುಕಿಯಿದ್ದಳು
ಅವಳಿನ್ನೂ ಹೋಗದಿದ್ದರೆ
ವಾಸವಾಗಿರುತ್ತಾಳೆ ಅಲ್ಲೇ.

	ಇದೊಂದು ಪ್ರತ್ಯಕ್ಷ ಪ್ರಮಾಣವಾದ ಸತ್ಯ. ಗುಡ್ಡದ ಕೆಳಗೆ ಅವಳು ವಾಸವಾಗಿದ್ದರೆ, ಅವಳಿನ್ನೂ ಹೋಗದೆ ಉಳಿದಿದ್ದರೆ ಅವಳಿನ್ನೂ ಅಲ್ಲೇ ವಾಸವಾಗಿರುವುದರಲ್ಲಿ ಆಶ್ಚರ್ಯವೇನು? ಇದರ ಸತ್ಯವನ್ನು ಯಾರು ಅಲ್ಲಗಳೆಯಬಲ್ಲರು!,

	ಗೋಲ್ಡ್‍ಸ್ಮಿತ್ ಕವಿಯ ಹಾಸ್ಯದ ಈ ಧಾಟಿಯನ್ನು ಅವನ ಸುಪ್ರಸಿದ್ಧ ನಾಯಿ ಸತ್ತಾಗ ಬರೆದ ಶೋಕಗೀತೆಯಲ್ಲೂ ಕಾಣಬಹುದು.

	ಈ ಹಾಸ್ಯಕವನಗಳಲ್ಲಿ ಬೆಕ್ಕನ್ನು ತಿಂದ ಇಲಿ, ಜಿಂಕೆಯ ಕೊಂಬನ್ನು ಗಂಟಲಲ್ಲಿ ಸಿಕ್ಕಿಸಿಕೊಂಡು ಸತ್ತ ಹುಲಿ, ಸಂಗೀತಗಾರನಾಗಿ ಪ್ರೇಮಗಾನದಲ್ಲಿ ತೊಡಗಿದ ಮಂಡೂಕ, ಕಣ್ಣು ಮುಚ್ಚಿಕೊಂಡು ಬೆಣ್ಣೆ ತಿಂದ ಬೆಕ್ಕುಗಳನ್ನು ಕುರಿತ ಹಲವಾರು ಪ್ರಸಂಗಗಳು ಬರುತ್ತವೆ. ಎಡ್ವರ್ಡ್ ಲಿಯರ್‍ನ, ಲೂಯಿ ಕ್ಯಾರಾಲ್‍ನ ಅನರ್ಥ ಕವನಗಳಲ್ಲಿ ಇಂಥ ನೂರಾರು ಹಾಸ್ಯದ ಸಂದರ್ಭಗಳು ಇವೆ. ಪುರಾಣಕಥೆಗಳನ್ನೂ ಪುರಾತನ ಪ್ರವಾಸಿಗರ ಕಥೆಗಳನ್ನೂ ಅಜ್ಜಿ ಕಥೆಗಳನ್ನೂ ಮೀರಿಸಿದ ಚಿತ್ರವಿಚಿತ್ರ ಕಲ್ಪನೆಯ ಮನುಷ್ಯರು, ಮೃಗಗಳು, ಹುಚ್ಚು ಸನ್ನಿವೇಶಗಳೂ ಇವರ ಅನರ್ಥ ಕವನಗಳಲ್ಲಿವೆ.

	ಇದಲ್ಲದೆ, ಡಾ.ಜಾನ್‍ಸನ್, ಜಾನ್ ಲಿಲಿ, ತಾಮಸ್ ಲೀಕಾಕ್, ಹುಡ್, ಡಬ್ಲ್ಯೂ. ಎಸ್. ಗಿಲ್ಬರ್ಟ್, ಜಿ.ಕೆ. ಚೆಸ್ಟರ್‍ಟನ್, ಸ್ಟೀಫನ್ ಲೀಕಾಕ್ ಮುಂತಾದವರೂ ಸ್ವಾರಸ್ಯವಾದ ಹಾಸ್ಯಕವನಗಳನ್ನು ಅಣಕವಾಡುಗಳನ್ನು ಅನರ್ಥ ಕಾದಂಬರಿಗಳನ್ನೂ ಬರೆದಿದ್ದಾರೆ. ನಿತ್ಯಜೀವನದಲ್ಲಿನ ಅತಿಯಾದ ತರ್ಕಬದ್ಧತೆಯನ್ನೂ ಓರೆಕೋರೆಗಳನ್ನೂ ತಿದ್ದಲು ಇಂಥ ನಗೆಬರೆಹಗಳೂ ಸಹಾಯಕವಾಗಬಲ್ಲವೆಂದು ಹೇಳಬಹುದು.				(ನೋಡಿ- ಕನ್ನಡದಲ್ಲಿ-ಹಾಸ್ಯ-ಸಾಹಿತ್ಯ)												(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ